ಬಿಲ್ಹಾರ್ಸಿಯಾಸಿಸ್
ಬಿಲ್ಹಾರ್ಸಿಯ (ಶಿಷ್ಟೊಸೋಮ) ಎಂಬ ಪರೋಪ ಜೀವಿಗಳಿಂದ ಮನುಷ್ಯರಲ್ಲಿ ಉಂಟಾಗುವ ರೋಗ ಪರಿಸ್ಥಿತಿ. ಪರ್ಯಯನಾಮ ಶಿಷ್ಟೊಸೋಮಿಯಾಸಿಸ್. ಶಿಷ್ಟೊಸೋಮಿಗಳ ಮೂರು ಪ್ರಭೇದಗಳು (ಶಿ.ಹಿಮಟೋಬಿಯಮ್, ಶಿ. ಮಾನ್ ಸೋನಿ, ಶಿ.ಜಪಾನಿಕಮ್) ವ್ಯಕ್ತಿಯ ಅಭಿಧಮನಿಗಳಲ್ಲಿ ಬೇರೆ ಬೇರೆ ಕಡೆ ಮೊಟ್ಟೆ ಇಡುವುದರಿಂದಲೂ ಚೂಪಾದ ಮುಳ್ಳುಗಳಿರುವ ಈ ಮೊಟ್ಟೆಗಳು ಆತನ ದೇಹದಿಂದ ವಿಸರ್ಜಿತವಾಗುವುದಕ್ಕಾಗಿ ಮಲ ಕೋಶಗಳನ್ನು ಸೇರಲು ಉಪಕ್ರಮಿಸುವಾಗ ದಾರಿಯಲ್ಲೆಲ್ಲ ಗಾಯವ್ರಣಗಳನ್ನು ಉಂಟು ಮಾಡುವುದರಿಂದಲೂ ರೋಗ ಪರಿಸ್ಥಿತಿ ಉಂಟಾಗುತ್ತದೆ. ಮರಿಹುಳು ವ್ಯಕ್ತಿಯ ದೇಹದ ಒಳಹೊಕ್ಕಾಗಲೇ ಪರವಸ್ತುವಿನ ಪ್ರವೇಶದಿಂದಾಗಿ ತೊಂದರೆ ಉದ್ಭವಿಸುತ್ತದೆ. ಮರಿಹುಳು ಮುಂದೆ ಸಾಗುತ್ತಿರುವಾಗ ಅದರ ಸ್ರಾವದಿಂದ ಉರಿ ಊತ, ಕೆಮ್ಮು, ಸಂಜೆಜ್ವರ, ಯಕೃತ್ತು ಮುಟ್ಟಿದರೆ ನೋವು, ರಕ್ತ ಮೂತ್ರ, ರಕ್ತಮಲ ಕಂಡುಬರುತ್ತದೆ. ತಟ್ಟೆ ಹುಳುಗಳ (ಫ್ಲ್ಯಾಟ್ ವಮ್ರ್ಸ್) ಗುಂಪಿಗೆ ಸೇರಿದ ಇವು ಪಕ್ವವಾಗಿ ಮನುಷ್ಯ ದೇಹದಲ್ಲಿ ಹಲವಾರು ವರ್ಷ ಜೀವಿಸುತ್ತಿದ್ದು ಸತತವಾಗಿ ಮೊಟ್ಟೆ ಇಡುತ್ತಲೇ ಇರುವುದರಿಂದ ರೋಗಲಕ್ಷಣ ಮತ್ತು ಬಾಧೆ ವ್ಯಕ್ತಿಯನ್ನು ವರ್ಷಗಟ್ಟಲೆ ಕಾಡಿಸುತ್ತವೆ. ಏಷ್ಯ, ಆಫ್ರಿಕ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಅಲ್ಲಲ್ಲಿ ವ್ಯಾಪಕವಾಗಿ ಕಂಡುಬರುವ ಈ ರೋಗದಿಂದ ಸುಮಾರು ಇಪ್ಪತ್ತು ಕೋಟಿ ಜನ ನರಳುವರೆಂದು ಅಂದಾಜಿದೆ. ಹಿಮಟೋಬಿಯಮ್ ಪ್ರಭೇದ ಆಫ್ರಿಕ, ಮಧ್ಯ ಪ್ರಾಚ್ಯ ಹಾಗೂ ಪೋರ್ಚುಗಲ್ಲಿನಲ್ಲಿ ಸಾಮಾನ್ಯ ಮನುಷ್ಯರ ಮೂತ್ರ ಕೋಶಗಳ ಹಾಗೂ ನೆರೆಯ ಆಭಿಧಮನಿಗಳಲ್ಲಿ ವಾಸಿಸುವುದರಿಂದ ಇವುಗಳ ಮೊಟ್ಟೆಗಳು ಸುಲಭವಾಗಿ ಮಲಾಶಯ ಮತ್ತು ಮೂತ್ರಾಶಯ ತಲುಪಿ ವಿಸರ್ಜಿತವಾಗುತ್ತವೆ. ಶಿ. ಜಪಾನಿಕಮ್ ಪ್ರಭೇದ ಜಪಾನ್, ಮಧ್ಯ ಹಾಗೂ ದಕ್ಷಿಣ ಚೀನ, ಫಿಲಿಪ್ಪೈನ್ ದ್ವೀಪಗಳು ಇಂಡೊನೇಷ್ಯ, ಥಾಯ್‍ಲೆಂಡುಗಳಲ್ಲಿ ಕಂಡುಬರುತ್ತದೆ. ಶಿ. ಮ್ಯಾನ್‍ಸೋನಿ ಪ್ರಭೇದ ಆಫ್ರಿಕ, ಸೌದಿ ಅರೇಬಿಯ, ಯೆಮೆನ್, ಪೋರ್ಟೊರೀಕೊ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಅಮೆರಿಕದ ಉತ್ತರ ಭಾಗಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಇವು ಮನುಷ್ಯರ ಕರುಳಿನಲ್ಲಿ ವಾಸಿಸುತ್ತ ಮಲದ ಮೂಲಕ ಮೊಟ್ಟೆಗಳನ್ನು ವಿಸರ್ಜಿಸುತ್ತವೆ. 

	ಸಿಹಿ ನೀರಿನಲ್ಲಿ ಈಜಾಡುತ್ತ ಇರುವ ಹುಳುವಿನ ಮರಿಗಳು ವ್ಯಕ್ತಿ ಆ ನೀರನ್ನು ಸ್ಪರ್ಶಿಸಿದಾಗ ಆತನ ಚರ್ಮದ ಮೂಲಕ ಅಭಿಧಮನಿಗಳನ್ನು ಪ್ರವೇಶಿಸುತ್ತದೆ. ಸರ್ಕೇರಿಯ ಮರಿಗಳೆಂದು ಕರೆಯಲ್ಪಡುವ ಇವು ಈಜಾಡಲು ಸಹಾಯಕವಾಗಿರುವ ತಮ್ಮ ಬಾಲವನ್ನು ದೇಹದ ಒಳ ಹೋಗುವಾಗ ಹೊರಗೇ ಬಿಟ್ಟು ಬಿಡುತ್ತವೆ. ಅಭಿಧಮನಿಗಳ ಮೂಲಕ ಸಾಗುತ್ತ ಶ್ವಾಸಕೋಶ ಮತ್ತು ಯಕೃತ್ತುಗಳ ಮೂಲಕ ಹಾಯ್ದು ತಮ್ಮ ವಿಶಿಷ್ಟ ನೆಲೆಗಳನ್ನು ತಲುಪಿ ಪಕ್ವಹುಳುಗಳಾಗಿ ಬೆಳೆಯುತ್ತವೆ. ಹೆಣ್ಣು ಗಂಡು ಬೇರೆ ಬೇರೆ. ಉದ್ದ ಸುಮಾರು 34 ಸೆಂಮೀ. ಗಂಡು ಸ್ವಲ್ಪ ದೊಡ್ಡದು. ಇದರ ಪಕ್ಕಗಳಲ್ಲಿ ದೇಹ ಮಡಚಿಕೊಂಡಿದ್ದು ನಾಳಾಕಾರ ಏರ್ಪಟ್ಟಿರುತ್ತದೆ. ಇದರಲ್ಲಿ ಹೆಣ್ಣು ಹುಳು ಸ್ವಲ್ಪ ಮಟ್ಟಿಗೆ ಹುದುಗಿಕೊಂಡು ಗಂಡಿನ ಜೊತೆಯೇ ಇರುತ್ತದೆ. ಗಂಡುಹುಳು ಸ್ಥಳೀಯವಾಗಿ ಅಂಟಿಕೊಂಡು ಪೌಷ್ಟಿಕಗಳನ್ನು ಹೀರಿಕೊಳ್ಳಲು ಅದಕ್ಕೆ ಅದರ ತಲೆಯ ಕಡೆ ಎರಡು ಹೀರು ತಟ್ಟೆಗಳು (ಸಕ್ಕರ್ಸ್) ಇರುತ್ತವೆ. ನಿಷೇಚಿತ ಹೆಣ್ಣು ಸಾವಿರಾರು ಮೊಟ್ಟೆ ಇಡುತ್ತದೆ. ವಿಸರ್ಜಿತವಾದ ಮೊಟ್ಟೆ ಕೆರೆ ಕೊಳ ಮುಂತಾದ ಸಿಹಿ ನೀರಿನ ಜಲಾಶಯ ತಲುಪಿದಾಗ ಅಲ್ಲಿ ಒಡೆದು ರೋಮಯುಕ್ತ ಮರಿಗಳಾಗಿ (ಮಿರಾಸೀಡಿಯಮ್ ಲಾರ್ವ) ಮಾರ್ಪಟ್ಟು ಈಜಾಡುತ್ತ ಶಂಖದ ಹುಳುವಿನ (ಸ್ನೆಯ್) ಮೈಯನ್ನು ಹೋಗುತ್ತವೆ. ಈ ಹುಳುವಿನ ದೇಹದ ಒಳಗೆ ಮೊದಲು ಇವುಗಳ ಸಂಖ್ಯಾವೃದ್ಧಿ ಆಗಿ ಅನಂತರ ಇವು ಸರ್ಕೇರಿಯ ಎಂಬ ಬಾಲಯುಕ್ತ ಮರಿ ಗಳಾಗಿ ಮಾರ್ಪಟ್ಟು ಹುಳುವಿನ ಮೈಕೊರೆದು ಕೊಂಡು ಹೊರಬಂದು ನೀರಿನಲ್ಲಿ ಈಜಾಡುತ್ತ ಜೀವಿಸುತ್ತವೆ. 

	ವ್ಯಕ್ತಿ ಇಂಥ ನೀರಿನಲ್ಲಿ ಕೈಕಾಲಾಡಿಸಿದರೆ ಸರ್ಕೇರಿಯಗಳು ಕೂಡಲೇ ಚರ್ಮಕ್ಕೆ ಹತ್ತಿಕೊಂಡು ಅದನ್ನು ಕೊರೆದು ನೆರೆಯ ಅಭಿಧಮನಿಗಳನ್ನು ಪ್ರವೇಶಿಸಿ ಪುನಃ ಜೀವನ ಚಕ್ರ ಪ್ರಾರಂಭಿಸುತ್ತವೆ. ಸರ್ಕೇರಿಯ ಮರಿಗಳು ಮಾತ್ರ ಮನುಷ್ಯ ದೇಹದಲ್ಲಿ ಬದುಕಿ ಉಳಿದು ಬಲಿಯಬಲ್ಲವು. ಇದು ಮಿರಾ ಸೀಡಿಯಮ್ ಮರಿಗಳಿಗೆ ಸಾಧ್ಯವಿಲ್ಲ. ಹಾಗೆಯೇ ಸರ್ಕೇರಿಯ ಮರಿಗಳು ಶಂಖದ ಹುಳುವಿನ ದೇಹವನ್ನು ಕೊರೆದು ಹೊರಬರುವುದೇ ಹೊರತು ಸರ್ಕೇರಿಯಗಳು ಶಂಖದ ಹುಳುವಿನ ದೇಹದ ಒಳಹೋಗುವುದಿಲ್ಲ. ಹುಳುಗಳು ಮನುಷ್ಯ ದೇಹದಲ್ಲಿ ಬಹುಕಾಲ ಇದ್ದು ಮೊಟ್ಟೆಗಳನ್ನು ಇಡುತ್ತಲೇ ಇರುವುದರಿಂದ ಅಂಗಗಳ ಭಿತ್ತಿಯ ಪುಟಿತತೆ (ಇಲಾಸ್ಟಿಸಿಟಿ) ನಾಶವಾಗುತ್ತದೆ. ದೀರ್ಘ ಕಾಲಿಕ ರೋಗಲಕ್ಷಣವಾಗಿ ಅಂಗಗಳಿಗೆ ಜಖಮ್ಮಾಗಿ ಅವುಗಳ ಕ್ರಿಯಾಶೈಥಿಲ್ಯ ಕಂಡುಬರಬಹುದು.  
	(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ